Conserve Historical Heritage Rally
ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕ ಹಾಗೂ ಇತಿಹಾಸ ಅಕಾಡೆಮಿ ಬೆಂಗಳೂರು ಇವರುಗಳ ಸಹಯೋಗದಲ್ಲಿ ಪೌರತ್ವ ತರಬೇತಿ ಶಿಬಿರದಡಿಯಲ್ಲಿ ದಿನಾಂಕ 14-10-2022 ರಂದು ಇತಿಹಾಸ ಅಕಾಡೆಮಿ ಬೆಂಗಳೂರು ನಿರ್ದೇಶನದಲ್ಲಿ “ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಿ ಇತಿಹಾಸ ಪರಂಪರೆ ಉಳಿಸಿ” ಅಂಗವಾಗಿ ಬೆಳಗಾವಿ ನಗರದ ಕೋಟೆ ಆವರಣದಲ್ಲಿರುವ ಕಮಲಬಸದಿ ದೇವಾಲಯದ ಆವರಣದ ಸ್ವಚ್ಚತೆ ಹಾಗೂ ನಮ್ಮ ಸುತ್ತ ಮುತ್ತ ಇರುವ ಹಳೆಯ ದೇಗುಲಗಳನ್ನು ಸಂರಕ್ಷಿಸುವ ಹಾಗೂ ಪ್ರಸಿದ್ಧ ಇತಿಹಾಸ ಸಾರುವ ಜಾಗ್ರತಿ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ.ಜಿ.ಧಾರವಾಡ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ ಇದೊಂದು ಜೈನ ದೇವಾಲಯವಾಗಿದ್ದು ರಟ್ಟರಾಜವಂಶದ ನಾಲ್ಕನೇ ಕಾರ್ತವೀರ್ಯನ ಆಸ್ಥಾನದಲ್ಲಿದ್ದ ಅಧಿಕಾರಿ ಬಿಚನನು ಜೈನ ಸನ್ಯಾಸಿ ಸುಭಚಂದ್ರಭಟ್ಟಾರಕದೇವರ ಮಾರ್ಗದರ್ಶನದಲ್ಲಿ ಕ್ರಿ.ಶ.1204 ರಲ್ಲಿ ನಿರ್ಮಿಸಿದನು.ಕಮಲ ಬಸದಿಯ ಮಧ್ಯದ ಛಾವಣಿಯು ಗುಮ್ಮಟದಿಂದ ವಿಸ್ತರಿಸಿರುವ ಕಮಲದ ಕೆತ್ತನೆಗಳನ್ನು ಒಳಗೊಂಡಿದೆ. ಆದ್ದರಿಂದ ಕಮಲ ಬಸದಿ ಎಂದು ಪ್ರಸಿದ್ಧವಾಗಿದೆ. ಕಮಲವು 72 ದಳಗಳನ್ನು ಹೊಂದಿದ್ದು ಭೂತ, ವರ್ತಮಾನ ಮತ್ತು ಭವಿಷ್ಯದ 24 ತೀರ್ಥಂಕರರನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ ಎಂದು ತಿಳಿಸಿ ದೇವಾಲಯದ ಮಹತ್ವವನ್ನು ವಿವರಿಸಿದರು.ಅದರಂತೆ ನಮ್ಮ ಸುತ್ತ ಮುತ್ತ ಇರುವ ಇಂತಹ ಹಲವಾರು ಹಳೆಯ ದೇಗುಲಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ,ಕಾರಣ ಇಂಥ ಜಾಥಾ ಕಾರ್ಯಕ್ರಮಗಳ ಮೂಲಕ ಇತಿಹಾಸ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇತಿಹಾಸ ಅಕಾಡೆಮಿ ಬೆಂಗಳೂರು ನಮಗೆಲ್ಲ ನಿರಂತರ ಮಾರ್ಗದರ್ಶನ ನೀಡುವ ಮೂಲಕ ಇತಿಹಾಸ ಪ್ರಜ್ಞೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೋಟೆ ಆವರಣದ ಮೂಲಕ ಐತಿಹಾಸಿಕ ಪರಂಪರೆ ಉಳಿಸಿ ಬೆಳೆಸುವ ಘೋಷಣೆಗಳನ್ನು ಕೂಗುತ್ತ ಭಿತ್ತಿ ಚಿತ್ರಗಳೊಂದಿಗೆ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಹಾಗೂ ಪ್ರಾಧ್ಯಾಪಕರೊಂದಿಗೆ ಸಾಗಿಬಂದು ಆವರಣದಲ್ಲಿ ಸೇರಿ ನಾವೆಲ್ಲ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದೆವು. ಕಾರ್ಯಕ್ರಮದಲ್ಲಿ ಭಾರತೀಯ ಇತಿಹಾಸ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯ ದೇವಾಲಯದ ಸಿಬ್ಬಂದಿ ಶ್ರೀ. ಭಗವತಿ, ಕಾಲೇಜಿನ ಎನ್.ಎಸ್.ಎಸ್.ಘಟಕದ ಸಂಯೋಜಕರಾದ ಡಾ.ಜಿ.ಆರ್.ಕೋಟೆಣ್ಣವರ, ಪೌರತ್ವ ತರಬೇತಿ ಶಿಬಿರದ ನಿರ್ದೇಶಕರಾದ ಡಾ.ಎನ್.ಎಸ್.ಜಾಧವ ಹಾಗೂ ಎಲ್ಲಾ ಪ್ರಾಧ್ಯಾಪಕರು , ಸಿಬ್ಬಂದಿ ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.